ಜೂನ್ 14 2020
ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.
ಯಾರಿರಲಿ, ಎಂತಿರಲಿ ಎಲ್ಲರ ದೇಹದಲ್ಲೂ ಇರುವ ರಕ್ತ ಒಂದೇ ಅಲ್ಲವೇ? ಹೌದು, ಜಗತ್ತಿನೆಲ್ಲೆಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ಅಗತ್ಯದಲ್ಲಿರುತ್ತಾರೆ; ಸಾವಿರಾರು ಮಂದಿ ತಮಗೆ ಬೇಕಾದವರಿಗೆ ಬೇಕಿರುವ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ. ರಕ್ತ ಅಕ್ಷರಶಃ ಜೀವದ್ರವ್ಯ.
ಅಪಘಾತ, ಕ್ಯಾನ್ಸರ್, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ. ಆದರೆ, ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜೀವಗಳು ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿಅಸು ನೀಗಿವೆ. ಈ ಹಿನ್ನೆಲೆಯಲ್ಲಿವಿಶ್ವದ ಬಹುತೇಕ ರಾಷ್ಟ್ರಗಳ ಸರಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ರಕ್ತದಾನ ಮಾಡಲು ದುಡ್ಡು ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ಒಂದು ಜೀವಕ್ಕೆ ಮಿಡಿಯುವ ದೊಡ್ಡ ಮನಸ್ಸಷ್ಟೆ.
ಬ್ಲಡ್ ಡೋನರ್ಸ್ ಮಂಗಳೂರು ರಿ ತಂಡವು ಕಳೆದ ಏಳು ವರ್ಷಗಳಿಂದ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತಿದೆ. ಈ ದಿನದಲ್ಲಿ ವಿಶೇಷವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆಓ ಅಥವಾ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಆಚರಿಸುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಎರಡು ರಕ್ತದಾನ ಶಿಬಿರಗಳು ಆಯೋಜಿಸಿದ್ದು ಒಂದು ಶಿಬಿರವು ಸೌದಿಅರೇಬಿಯಾದ ದಮ್ಮಾಂ ನಲ್ಲಿ ಆಯೋಜಿಸಿದರೆ, ಇನ್ನೊಂದು ಶಿಬಿರವು ಪುತ್ತೂರಿನ ಕುಂಬ್ರದಲ್ಲಿ ಜರುಗಲಿದೆ.
ಬ್ಲಡ್ ಡೋನರ್ಸ್ ಮಂಗಳೂರು (ರಿ) ತಂಡದ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ರಕ್ತದಾನ ಮಾಡಿದ ಮತ್ತು ಸಹಕರಿಸಿದ ಪ್ರತಿಯೊಬ್ಬ ರಕ್ತದಾನಿಗೂ ಈ ದಿನದ ಶುಭಾಶಯಗಳು.
Comments
Post a Comment