ರಕ್ತದಾನಕ್ಕೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಮೂಲಕ ಮಾನವೀಯತೆಯಬಾಂಧವ್ಯ ಬೆಸೆದ ಕರಾವಳಿ ಭಾಗದ ಯುವಕರ ತಂಡ
ಬ್ಲಡ್ ಡೋನರ್ಸ್ ಮಂಗಳೂರು (ರಿ) ನ ಏಳನೇ ವರ್ಷಕ್ಕೊಂದು ಅಕ್ಷರದ ಮುನ್ನುಡಿ.ಬರಹ: ಝಹೀರ್ ಶಾಂತಿನಗರ
(ನೆನಪಿನ ನಾವಿಕ)
ಹುಟ್ಟುವಾಗೀ ಧನವ ಮೊಟ್ಟೆಗಟ್ಟಿಳಿದನೇ?
ಕಟ್ಟಕಡೆಯಲ್ಲಿ ಕೊಂಡೊಯ್ಯನಿದನರಿದು
ಕೊಟ್ಟುಂಬ ದಾನಿ ಸರ್ವಜ್ಞ ||
ರಕ್ತದಾನ ಜೀವದಾನ ಎನ್ನುತ್ತಾರೆ ಆದರೆ ರಕ್ತದಾನ ಮಾಡಲು ಜನರು ಅತ್ಯಾವಶ್ಯಕ. ಈ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನಿಗಳಾಗಬೇಕು. ಈ ದಾನಿಗಳಿಗೆ ಒಬ್ಬ ನಾವಿಕ ಇರಬೇಕು. ಅದುವೇ ಬ್ಲಡ್ ಡೋನರ್ಸ್ ಮಂಗಳೂರು. ಇದೀಗ ಬ್ಲಡ್ ಡೋನರ್ಸ್ ಮಂಗಳೂರಿಗೆ 7 ನೇ ಸಂವತ್ಸರದ ಸಂಭ್ರಮ. ಇದರ ಹರುಷಕ್ಕೊಂದು ಅಕ್ಷರದ ಮುನ್ನುಡಿ ಈ ನನ್ನ ಪುಟ್ಟ ವರದಿ.
ಬ್ಲಡ್ ಡೋನರ್ಸ್ ಮಂಗಳೂರು ಇದರ ಹುಟ್ಟು ಬೆಳವಣಿಗೆ:
ಏಳು ವರ್ಷಗಳ ಹಿಂದೆ ಮಂಜೇಶ್ವರ ಮೂಲದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ಬಡ ಕುಟುಂಬದ ಒಂದು ಮಹಿಳೆಗೆ ರಕ್ತದ ಅವಶ್ಯಕತೆ ಇದ್ದಾಗ ಯಾರು ಕೂಡ ಮುಂದೆ ಬರುವುದಿಲ್ಲ. ಇದನ್ನು ಮನಗಂಡ ಸ್ನೇಹಿತರ ತಂಡ ಆಶ್ಚರ್ಯಚಕಿತವಾಗಿ ಬಿಡುತ್ತದೆ. ಆ ಮಹಿಳೆಯ ಸಂಬಂಧಿಕರು ಒಂದು ಯುನಿಟ್ ರಕ್ತಕ್ಕೆ ಒದ್ದಾಡುವಾಗ ಇನ್ನೂ ಹಲವಾರು ಜನರು, ಹಲವಾರು ಕಡೆ, ಎಷ್ಟು ಒದ್ದಾಟ ನಡೆಸಬಹುದು ಎಂಬ ಪ್ರಶ್ನೆ ಮೂಡ ತೊಡಗುತ್ತದೆ. ಆ ಸ್ನೇಹಿತರ ಬಳಗಕ್ಕೆ ಕಂಡದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ನಮ್ಮ ಪಾತ್ರ ಬಹಳ ಮುಖ್ಯ. ರಕ್ತದಾನದ ಜಾಗೃತಿಯನ್ನು ಮೂಡಿಸಿ ಆರೋಗ್ಯವಂತರು ಸ್ವಯಂ ಪ್ರೇರಿತ ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸುವ ಕೆಲಸ ಕಾರ್ಯಗಳು ಮಾಡಲು ನಾವು ಕೈ ಜೋಡಿಸಬೇಕು ಎಂದು. ಆ ಬಡ ರೋಗಿಗೆ ರಕ್ತದ ವ್ಯವಸ್ಥೆ ಮಾಡಿ ಅಲ್ಲಿಂದ ಹೊರಟ ಸ್ನೇಹಿತರ ಬಳಗ ತಡ ಮಾಡದೆ ಒಂದು ಸಂಸ್ಥೆಯನ್ನು ರಚನೆ ಮಾಡುತ್ತಾರೆ. ಅದುವೇ ಬ್ಲಡ್ ಡೋನರ್ಸ್ ಮಂಗಳೂರು. ಈ ಸಂಸ್ಥೆಯ ಸ್ಥಾಪನೆಗೆ ಕಾರಣಕರ್ತರಾದವರು ಸಿದ್ದೀಖ್ ಮಂಜೇಶ್ವರ ಎನ್ನುವ ವ್ಯಕ್ತಿ. ತನ್ನ ಸ್ನೇಹಿತರನ್ನು ಒಳಗೊಂಡ ಸಾಮಾಜಿಕ ಜಾಲತಾಣದ ಒಂದು ಅಂಶವಾದ ವಾಟ್ಸ್ ಆಫ್ ಗ್ರೂಪ್ ರಚನೆ ಮಾಡಿ, ಅಲ್ಲಿ ರಕ್ತದ ಅವಶ್ಯಕ ವಿಷಯಗಳನ್ನು ಚರ್ಚಿಸತೊಡಗುತ್ತಾರೆ. ತದನಂತರ ಆ ಸಂಸ್ಥೆಯನ್ನು ಕಾನೂನಿನ ಪ್ರಕಾರ ರಿಜಿಸ್ಟರ್ ಮಾಡಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯಾಗಿ ಕಾರ್ಯರೂಪಕ್ಕೆ ತರುತ್ತಾರೆ. ಅದು ಇಂದು 40 ಕ್ಕೂ ಹೆಚ್ಚು ವಾಟ್ಸ್ ಆಫ್ ಗ್ರೂಪ್ ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಚರಿಸುತ್ತಿದೆ. ಸಾಮಾಜಿಕ ರಂಗದಲ್ಲಿ ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ, ಹಾಗೂ ನೆರೆ ರಾಜ್ಯವಾದ ಕೇರಳದ ಜಿಲ್ಲೆಗಳಲ್ಲಿಯೂ ಕೂಡ ಒಟ್ಟು ಸರಿಸುಮಾರು 235 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ನಡೆಸಿ, ಹಾಗೂ 21,000 ಕ್ಕೂ ಅಧಿಕ ಯೂನಿಟ್ ರಕ್ತವನ್ನು ರೋಗಿಗಳಿಗೆ ಪೂರೈಕೆ ಮಾಡಿದ ಹೆಮ್ಮೆ ಬ್ಲಡ್ ಡೋನರ್ಸ್ ಮಂಗಳೂರಿಗೆ ಇದೆ. ಪ್ರತಿ ರಕ್ತದಾನಿಯೂ ನಾಯಕ ಎಂದು ಗುರುತಿಸಿದರೆ.., ಆ ನಾಯಕನಿಗೆ ಮಾರ್ಗದರ್ಶಿ ಈ ಬ್ಲಡ್ ಡೋನರ್ಸ್ ಮಂಗಳೂರು (ರಿ).
ಬ್ಲಡ್ ಡೋನರ್ಸ್ ಮಂಗಳೂರು (ರಿ) ಯಾವ ರೀತಿ ಕಾರ್ಯಚರಿಸುತ್ತಿದೆ.
ಅನ್ನದಾನಕ್ಕಿಂತ ಇನ್ನೂ ದಾನವಿಲ್ಲ ಎನ್ನುವಂತೆ, ರಕ್ತದಾನಕ್ಕಿಂತ ಶಕ್ತದಾನವಿಲ್ಲ ಎಂಬ ಆಶಯದೊಂದಿಗೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ ದಾನ ಮಾಡುವುದಕ್ಕೆ ರಕ್ತದಾನ ಎನ್ನುವರು. ಅದೇ ರೀತಿ ರಕ್ತ ದಾನಿಗಳನ್ನು ಹುಡುಕಿ ಅಥವಾ ಅವರನ್ನು ರಕ್ತದಾನಿಗಳಾಗಲು ಪ್ರೇರಣೆ ನೀಡಿ ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ ರಕ್ತದಾನದ ಮೂಲಕ ರೋಗಿಯ ಜೀವ ಉಳಿಸುವ ಪ್ರಯತ್ನ ಮಾಡುವಂತೆ ಕಾರ್ಯಚರಿಸುವುದೇ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆ. ಈಗ ನಿಮಗೆ ಅರ್ಥವಾಗಿರಬೇಕು, ಯಾವ ರೀತಿ ಕಾರ್ಯಚರಿಸುತ್ತಿದೆ ಎಂದು. ಸಂಕ್ಷಿಪ್ತವಾಗಿ ವಿವರಗಳನ್ನು ನೀಡುತ್ತೇನೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ, ಊರಿನ ಸ್ಥಳೀಯ ಸಂಘ- ಸಂಸ್ಥೆಗಳ, ರಕ್ತನಿಧಿಗಳ ಸಹಕಾರದಿಂದ ರಕ್ತದಾನದ ಶಿಬಿರಗಳನ್ನು ಏರ್ಪಡಿಸಿ, ರಕ್ತದಾನದ ಮೇಲೆ ಇರುವ ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಸಹಕರಿಸುತ್ತದೆ. ತುರ್ತು ಸಂದರ್ಭದಲ್ಲಿ ರಕ್ತ ದಾನಿಗಳನ್ನು ಬ್ಲಡ್ ಡೋನರ್ಸ್ ಮಂಗಳೂರು (ರಿ) ನ ಕಾರ್ಯನಿರ್ವಾಹಕರು ಹುಡುಕಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ರೋಗಿಯ ಜೀವ ಉಳಿಸಲು ಸಹಕರಿಸುತ್ತಾರೆ. ಅದೇ ರೀತಿ ಸಾಮಾಜಿಕ ಜಾಲತಾಣದ ಭಾಗವಾದ ವಾಟ್ಸ್ ಆಫ್ ನಲ್ಲಿ 40 ಗ್ರೂಪ್ ಗಳು ಬ್ಲಡ್ ಡೋನರ್ಸ್ ಮಂಗಳೂರಿನ ಹೆಸರಿನಲ್ಲಿ ಅಧಿಕೃತವಾಗಿ ಕಾರ್ಯಚರಿಸುತ್ತಿದೆ. ಅದರಲ್ಲಿ 10,000 ಕ್ಕೂ ಅಧಿಕ ಸದಸ್ಯರಿದ್ದಾರೆ. 51 ಕಾರ್ಯನಿರ್ವಾಹಕರನ್ನು ಒಳಗೊಂಡ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆ ವಿದೇಶಿ ರಾಷ್ಟ್ರದಲ್ಲೂ ಕರವಾಳಿ ಮೂಲದ ಕಾರ್ಯನಿರ್ವಾಹಕರು ಇದ್ದಾರೆ . ಅಲ್ಲಿ ಸ್ಥಳೀಯ ಸಂಸ್ಥೆ, ಆಸ್ಪತ್ರೆ, ಬ್ಲಡ್ ಬ್ಯಾಂಕ್ ನ ಸಹಾಯಕರದೊಂದಿಗೆ ರಕ್ತ ದಾನದ ಶಿಬಿರಗಳನ್ನು ಕಾರ್ಯನಿರ್ವಾಹಕರು ಏರ್ಪಡಿಸಿ
ಅಲ್ಲಿಯೂ ಕೂಡ ರೋಗಿಗಳ ಆಶಾಕಿರಣವಾಗಿದೆ ಎಂಬುದು ಪ್ರಶಾಂಸ್ಪನಾರ್ಹ.
ರಕ್ತದಾನಕ್ಕೆ ಮಾತ್ರ ಸೀಮಿತವಲ್ಲ, ಇತರೆ ಸಾಮಾಜಿಕ ಕಾರ್ಯಕ್ಕೂ ಸೈ ಎಂದು ತೋರಿಸಿಕೊಟ್ಟ ಬ್ಲಡ್ ಡೋನರ್ಸ್ ಮಂಗಳೂರು (ರಿ)
ಬಂಧುಗಳೇ.., ದಾನವು ಧರ್ಮದ ಮೂಲವಯ್ಯ ಎಂಬಂತೆ ರಕ್ತದಾನಕ್ಕೆ ಮಾತ್ರ ಸೀಮಿತವಾಗದೆ, ತೀರ ಬಡ ರೋಗಿಗಳ ಆಸ್ಪತ್ರೆಯ ಖರ್ಚು-ವೆಚ್ಚಗಳು ಅಂದರೆ ಬಡತನದಿಂದ ರೋಗಿಗಳು ಆಸ್ಪತ್ರೆ ಬಿಲ್ಲು ಪಾವತಿಸದೆ ಇದ್ದಾರೆ ಅಂತವರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕ ರನ್ನು ಸಂಪರ್ಕಿಸಿದರೆ, ಕಾರ್ಯನಿರ್ವಾಹಕರು ದಾನಿಗಳ ಸಹಾಯ ಪಡೆದು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಕೂಡ ಮಾಡಿರುತ್ತಾರೆ. ಮಂಗಳೂರಿನ ಮುಡಿಪ್ಪುವಿನ ಸಮೀಪ ಒಂದು ಅರ್ಹ ಬಡ ಕುಟುಂಬಕ್ಕೆ ದಾನಿಗಳಿಂದ ಸಹಾಯ ಪಡೆದು ಮನೆ ನಿರ್ಮಾಣ ಮಾಡುತ್ತಿದೆ. ಅದು ಈಗ ಅಂತಿಮ ಘಟ್ಟ ಕೂಡ ತಲುಪಿದೆ. ನೆರೆ ಬಂದಾಗ ಜಿಲ್ಲೆಯ ಜನರಿಗೂ ಮಾತ್ರವಲ್ಲ ಉತ್ತರ ಕರ್ನಾಟಕದ ಕೆಲವೊಂದು ನಿರಾಶ್ರಿತರ ಪ್ರದೇಶಕ್ಕೆ ದಾವಿಸಿ ಅಗತ್ಯ ವಸ್ತುಗಳನ್ನು ಕೂಡ ಪೂರೈಕೆ ಮಾಡಿದೆ. ಅದೇ ರೀತಿ ನೆರೆ ರಾಜ್ಯ ಕೇರಳ ಇಲ್ಲಿಯೂ ಕೆಲವು ನಿರಾಶ್ರಿತರ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಈ ಬ್ಲಡ್ ಡೋನರ್ಸ್ ಮಂಗಳೂರು (ರಿ).
ಕೋವಿಡ್-19 ವಾರಿಯರ್ಸ್ ಆಗಿ ಸಂಸ್ಥೆಯ ಕಾರ್ಯ
ಕೋವಿಡ್ 19 ಕೊರೋನಾ ವೈರಾಸ್ ಭಾರತವನ್ನು ಕೂಡ ಬಿಡದೆ ಲಗ್ಗೆ ಇಟ್ಟಾಗ ಇತ್ತ ಭಾರತ ಸರಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸುತ್ತದೆ. ಈ ಸಂದರ್ಭದಲ್ಲಿ ರಕ್ತಕ್ಕೂ ರಕ್ತನಿಧಿಯಲ್ಲಿ ಅಭಾವ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯನಿರ್ವಾಹಕರು ಕೋವಿಡ್ 19 ವಾರಿಯಸ್ ಆಗಿ ಕಾರ್ಯಚರಿಸಲು ಸನ್ನದ್ಧರಾಗಿರುತ್ತಾರೆ. ರಕ್ತದಾನಿಗಳನ್ನು ಲಾಕ್ ಡೌನ್ ನಲ್ಲಿಯೂ ಕೂಡ ರಕ್ತನಿಧಿಗೆ ಕರೆದು ಕೊಂಡು ಹೋಗಿ ಸ್ವಯಂ ಪ್ರೇರಿತ ರಕ್ತದಾನ ಮಾಡಿಸುತ್ತಾರೆ. ಅದೇ ರೀತಿ ಬಡ ಕುಟುಂಬಕ್ಕೆ ಆಹಾರದ ಕಿಟ್ ಗಳನ್ನು ನೀಡಿರುತ್ತದೆ. ಔಷಧಿಗಳನ್ನು ರೋಗಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಹಾಗೂ ರೋಗಿಗಳಿಗೆ ಅಂಬ್ಯುಲೈನ್ಸ್ ವ್ಯವಸ್ಥೆಯನ್ನು ಕೂಡ ಈ ಸಂಸ್ಥೆಯ ಮಾಡಿದೆ. ಕೋವಿಡ್-19 ವಾರಿಯರ್ಸ್ ಆಗಿ ಇಲ್ಲಿಯೂ ಯಾವುದೇ ಪ್ರತಿಫಲಾಪೇಕ್ಷೆವಿಲ್ಲದೆ ಕಾರ್ಯಚರಿಸುತ್ತಿರುವುದು ಅಭಿನಂದನಾರ್ಹ.
ಕಾರ್ಯನಿರ್ವಾಹಕರ ಸಹೋದರತೆ, ದಾನಿಗಳ ಮಾನವೀಯತೆ ಸಂಸ್ಥೆಯ ಏಳನೇ ವರ್ಷಗಳ ಯಶಸ್ವಿನ ಗುಟ್ಟು : ಸಿದ್ದೀಖ್ ಮಂಜೇಶ್ವರ
ಸಂಸ್ಥೆಯ ಅಡಿಪಾಯವೆ..,ನನ್ನ ಸ್ನೇಹಿತರಾದ ಕಾರ್ಯನಿರ್ವಾಹಕರು.., ಊರಿನಲ್ಲಿಯೂ, ವಿದೇಶದಲ್ಲಿ ಇರುವ ನನ್ನ ಸ್ನೇಹಿತರು ಇಂದಿಗೂ ಕೂಡ ಸಹೋದರತೆಯ ಭಾವನೆಗಳ ಮೂಲಕ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅದೇ ರೀತಿ ಸಹೋದರತೆಯ ಜೊತೆ ಸೌಹಾರ್ದತೆಯೂ, ಮಾನವೀಯತೆಯೂ ಮುಖ್ಯ. ಯಾವುದೇ ಜಾತಿ, ಮತ, ಭೇದವಿಲ್ಲ ರಕ್ತದಾನ ಮಾಡಲು ಯುವಕರಿಗೆ ಪ್ರೇರಣೆ ನೀಡುತ್ತಿದೆ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ಕೂ ಹುರಿದುಂಬಿಸುತ್ತಿದೆ. ಇದುವೇ ನಮ್ಮ ಸಂಸ್ಥೆಯ ಏಳನೆಯ ವರ್ಷಗಳ ಯಶಸ್ವಿನ ಗುಟ್ಟು . ನಮ್ಮ ಜೊತೆ ಕೈ ಜೋಡಿಸಿದ ಎಲ್ಲಾ ಸಮಾಜ ಮುಖಿ ಕಾರ್ಯಗಳ ಸಂಘ-ಸಂಸ್ಥೆಗಳಿಗೂ, ರಕ್ತದಾನಿಗಳಿಗೂ, ರಕ್ತವಲ್ಲದೆ ಇನ್ನಿತರ ರೂಪದಲ್ಲಿ ದಾನ ಮಾಡಿದ ದಾನಿಗಳಿಗೂ ಧನ್ಯವಾದಗಳು. ನಿಮ್ಮ ಆಶೀರ್ವಾದ ಹೀಗೆ ಮುಂದುವರಿಯಲಿ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಸಿದ್ಧೀಖ್ ಮಂಜೇಶ್ವರ.
ಒಳಿತು ಮಾಡು ಮನುಷ ನೀನು ಇರುವುದು ಮೂರು ದಿವಸ ಎನ್ನುವ ಹಾಡು ನೆನಪಾಗುತ್ತಿದೆ. ಎಲ್ಲರಿಗೂ ಮರಣ ಎಂಬುದು ಇದೆ. ಜೀವಿತವಾದಿಯ ಕಾಲದಲ್ಲಿ ನನ್ನಿಂದ ಏನಾದರೂ ಸಮಾಜಕ್ಕೆ ಒಳಿತು ಮಾಡಬೇಕು ಎನ್ನುವಂತೆ ಕರಾವಳಿ ಭಾಗದ ಯುವಕರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯನ್ನು ಹುಟ್ಟು ಹಾಕಿ ರಕ್ತದಾನಕ್ಕೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬಾಂಧವ್ಯ ಬೆಸೆದಿರುವುದು ಮೆಚ್ಚಲೇ ಬೇಕು.
ಬನ್ನಿ ಗೆಳೆಯರೇ, ರಕ್ತದಾನ ಮಾಡೋಣ..
ಕೆಲವೊಂದು ನುಡಿಮುತ್ತುಗಳು..
ಸ್ವಲ್ಪ ಹಂಚಿಕೊಳ್ಳೋಣ, ಸ್ವಲ್ಪ ಕರುಣೆ ತೋರಿಸೋಣ, ರಕ್ತದಾನ ಮಾಡೋಣ.
ರಕ್ತದಾನದಿಂದ ನಿಮಗೇನೂ ನಷ್ಟವಿಲ್ಲ, ಆದರೆ ನೀವು ಒಂದು ಅಮೂಲ್ಯ ಜೀವವನ್ನು ಉಳಿಸಬಲ್ಲಿರಿ.
ಯಾವ ತಾಯಿಯ ಕಣ್ಣೀರಿಗೂ ತನ್ನ ಮಗುವಿನ ಜೀವವನ್ನು ಉಳಿಸುವ ಶಕ್ತಿ ಇಲ್ಲ. ಆದರೆ ನಿಮ್ಮ ರಕ್ತದಿಂದ ಕೆಲವು ತಾಯಂದಿರ ಮಕ್ಕಳ ಜೀವವನ್ನು ಉಳಿಸಬಹುದು.
ವರದಿ: ಝಹೀರ್ ಶಾಂತಿನಗರ
(ನೆನಪಿನ ನಾವಿಕ)
Comments
Post a Comment